ಇವತ್ತು ಗುರುವಾರ. ನನಗೆ ಅಲ್ಲಿಗೆ ಹೋಗಬೇಕಮ್ಮಾ… ಮಗಳು ಶಾಲೆಯಿಂದ ಬೇಗ ಬಂದರೆ… ಎಂದಿನಂತೇ ಏನಾದರೂ ಕಾರಣ ಹೇಳಿ ಬಿಡು ಅಮ್ಮಾ. ಅವಳಿಗಿಷ್ಟದ ತಿಂಡಿ ಮಾಡಿದ್ದೇನೆ…
ಸಾಯಿರಾ ಸಿಂಗರಿಸಿಕೊAಡು ಬುರ್ಖಾ ಧರಿಸಿ ಹೊರಟಾಗ ತಾಯಿ ಫಾತೀಮಾ ಟಿಫಿನ್ ಬಾಕ್ಸ್ನ್ನು ಮಗಳ ಕೈಗೆ ಕೊಡುತ್ತಾ ಇದರಲ್ಲಿ ಶೇವಿಗೆ ಪಾಯಸ ಇದೆ, ಆತನಿಗೆ ತುಂಬಾ ಇಷ್ಟ ತಾನೆ… ಕೊಡು.. ಎಂದರು ನಗುತ್ತಾ, ಅಂಗಳದಲ್ಲಿಟ್ಟ ಸ್ಕೂಟರ್ ಹತ್ತಿ ಆಕೆ ಕೈಯಾಡಿಸಿದಳು.
ಶಾಂತ ಲಾಡ್ಜ್’ನೊಳಗೆ ಸಾಯಿರಾ ಬಂದಾಗ ವಾಚ್ಮ್ಯಾನ್ ಪರಿಚಯದ ನಗೆ ಬೀರಿ ಸಲಾಮ್ ಹೇಳಿದ. ಸಾರ್… ಬಂದಿದ್ದರಾ? ಸಾಯಿರಾ ಕೇಳಿದಾಗ, ವಾಚ್ಮ್ಯಾನ್ ನಸುನಗುತ್ತಾ ಹೌದು ಮ್ಯಾಡಮ್… ಅವರು ಬಂದು ಆದಾಗಲೇ ಅರ್ಧ ಗಂಟೆ ಆಗಿರಬಹುದು. ಸಾಯಿರಾ ಅವಸರದಲ್ಲಿ ಲಿಫ್ಟ್ನೊಳಗೆ ನುಸುಳಿಕೊಂಡು ಉಸಿರು ಬಿಟ್ಟಳು. ರೂಮ್ ನಂಬರ್ ನೂರಹನ್ನೊಂದರ ಮುಂದೆ ನಿಂತ ಸಾಯಿರಾ ಮೆಲ್ಲನೆ ಬಾಗಿಲು ತಟ್ಟಿದಳು. ಮೆಲ್ಲನೆ ಬಾಗಿಲು ತೆರೆಯಿತು. ಸಾಯಿರಾ ನಸು ನಗುತ್ತಾ ತನ್ನೆದುರು ನಿಂತವನನ್ನು ನೋಡಿದಳು. ಸಲಾಮ್ ಹೇಳಿದ ಆತ ಅವಳನ್ನು ಬರಸೆಳೆದುಕೊಳ್ಳುತ್ತಾ, “ಯಾಕಿಷ್ಟು ತಡ ಮಾಡಿದೆ ಚಿನ್ನಾ?” ಎಂದ ನಸು ಮುನಿಸು ತೋರಿಸುತ್ತಾ. ಸ್ಸಾರೀ… ಮಗಳನ್ನು ಶಾಲೆಗೆ ಕಳುಹಿಸಿ ಬರಬೇಕಲ್ಲವೇ? ಬೇಸರ ಮಾಡಬೇಡಿ… ಬರುವ ವಾರ ನಿಮಗಿಂತಲೂ ಮುಂಚೆ ನಾನೇ ಬಂದು ನಿಮ್ಮನ್ನು ಕಾಯುತ್ತೇನೆ… ಸರಿನಾ? ಅಂದಹಾಗೆ ಅಮ್ಮ ನಿಮಗೆ ಪಾಯಸ ಕೊಟ್ಟು ಕಳುಹಿಸಿದ್ದಾಳೆ. ನೀವು ನಿಮ್ಮ ಬಾಹುಗಳ ಬಿಗಿತವನ್ನು ಸಡಲಿಸಿದರೆ… ನಾನು ಟಿಫಿನ್ ಬಿಚ್ಚಬಹುದೂ… ಸಾಯಿರಾ ತುಂಟ ನೋಟದೊಂದಿಗೆ ಹೇಳಿದಾಗ ಅವನು ಆಕೆಯ ಸೊಂಟದಿಂದ ಕೈ ತೆಗೆದ.
ವಾಹ್! ಅತ್ತೆಯ ಕೈ ರುಚಿ ಅದ್ಭುತ! ನನ್ನ ಅಮ್ಮನೂ ಇದೇ ರೀತಿ ಪಾಯಸ ಮಾಡುತ್ತಿದ್ದರು… ಪಾಯಸವನ್ನು ಚಪ್ಪರಿಸುತ್ತಾ ಪತಿ ಹೇಳಿದಾಗ ಸಾಯಿರಾ ಖುಶಿಗೊಂಡಳು. ಹನೀಫ್ ತಾನು ತಂದ ಮಲ್ಲಿಗೆಯನ್ನು ಪತ್ನಿಯ ತಲೆಗೆ ತಾನೇ ಮುಡಿಸುತ್ತಾ, “ನೀನು ಸದಾ ಮದುಮಗಳಂತೇ ನನ್ನ ಮುಂದೆ ಇರಬೇಕು ಸಾಯಿರಾ, ನಿನ್ನ ಮಗಳ ಹುಟ್ಟಿದ ಹಬ್ಬ ನಾಳೆ ತಾನೆ. ನನಗೆ ದಾರಿಯಲ್ಲಿ ಬರುತ್ತಿರಬೇಕಾದರೆ ನೆನಪಾಯಿತು. ಹೋದ ವರ್ಷ ಅವಳಿಗೆ ಕಾಲಿನ ಗೆಜ್ಜೆ ನೀಡಿದ್ದೆ. ಈ ಬಾರಿ ನಾನು ಏನು ಖರೀದಿಸಲಿ…” ಎಂದು ಚಿಂತಿಸುತ್ತಿದ್ದಾಗ ಸುಂದರವಾದ ಡ್ರೆಸ್ ಶೋಕೇಸ್ನಲ್ಲಿ ಕಂಡು ಬಂತು. ಅದನ್ನೇ ಉಡುಗೊರೆಯಾಗಿ ತಂದೆ. ನೀವು… ಅವಳನ್ನು ಪ್ರೀತಿಸುತ್ತೀರಿ… ಆದರೆ… ಆಕೆಗೆ ನಿಮ್ಮ ಪರಿಚಯವೂ ಇಲ್ಲ! ಅವಳ ಶಾಲೆಯ ಫೀಸ್, ಆಕೆಗೆ ವಸ್ತ್ರ, ಉಡುಗೊರೆ ಎಲ್ಲವನ್ನೂ ನೀವು ಕೊಡುತ್ತಿದ್ದೀರಿ, ಅವಳಿಗೆ ಅದನ್ನೆಲ್ಲಾ ನೀಡುತ್ತಿರುವ ವ್ಯಕ್ತಿಯ ಕುರಿತು ಏನೂ ತಿಳಿದಿಲ್ಲ. ನಾನು ಏನು ಮಾಡಲಿ ಹನೀಫ್? ಯಾವಾಗ ಅವಳಿಗೆ ತಿಳಿಸುವುದು? ಆಕೆಯ ಅಮ್ಮನ ಬದುಕಲ್ಲಿ ಪತಿ’ ಎಂಬ ಓರ್ವನಿದ್ದಾನೆ… ಆಕೆಗೆ ಮಲ ತಂದೆ ಇದ್ದಾರೆಂದು ಹೇಗೆ ತಿಳಿಸಲಿ?
ಅವಳ ಅಪ್ಪ ಆಕ್ಸಿಡೆಂಟ್ನಲ್ಲಿ ತೀರಿ ಹೋದ ನಂತರ ನಾನು ಬೇರೆ ಮದುವೆನೇ ಆಗಲಾರೆ ಎಂದು ನಿರ್ಧಾರ ಮಾಡಿದ್ದೆ. “ಅಮ್ಮಾ… ನಿಮ್ಮನ್ನು ನಾನೇ ಸಾಕುತ್ತೇನೆ, ನಾನು ಕಲಿತು ಉದ್ಯೋಗ ಮಾಡ್ತೇನೆ, ಅಪ್ಪನನ್ನು ನೆನೆದು ಕಣ್ಣೀರು ಹಾಕುತ್ತಿರಬೇಡಿ…!” ಎಂದು ನನ್ನನ್ನು ಅಂದು ಸಂತೈಯಿಸಿದಾಗ ಪಿಂಕಿಗೆ ಎಂಟು ವರ್ಷ. ಈಗ ಹದಿನಾಲ್ಕು ವರ್ಷಕ್ಕೆ ಕಾಲಿಡುತ್ತಿದ್ದಾಳೆ. ನಿಮ್ಮನ್ನು ಮದುವೆ ಆಗಿ ಎರಡು ವರ್ಷ ಆಯಿತು. ಪಿಂಕಿಗೆ ಅವಳ ಅಮ್ಮನ ಬದುಕಲ್ಲಿ ಬೇರೊಬ್ಬ ಬರುವುದೇ ಇಷ್ಟವಿಲ್ಲ ಎಂಬ ಸತ್ಯ ನನಗೆ ತಿಳಿದಿತ್ತು. ಅಮ್ಮನ ಬಲವಂತ ಹಾಗೂ ತನ್ನ ಭವಿಷ್ಯದ ಚಿಂತೆ ಮಾಡಿಕೊಂಡು ನಾನು ಮರು ವಿವಾಹಕ್ಕೆ ಮನಸ್ಸು ಮಾಡಿದ್ದೆ. ಇಪ್ಪತೆಂಟರ ಹರೆಯಕ್ಕೇ ನಾನು ಗಂಡನನ್ನು ಕಳೆದುಕೊಂಡಾಗ ಮಗಳಿಗಾಗಿ ಮಾತ್ರ ಅಂದು ಬದುಕಿದ್ದೆ. ವರ್ಷ ಕಳೆದಂತೇ ರಾತ್ರಿಯು ನನ್ನನ್ನು ನಿದ್ರಾಹೀನಳನ್ನಾಗಿಸಿತು. ಬಯಕೆಗಳನ್ನು ತಡೆದುಕೊಳ್ಳಲು ನಾನು ಬಚ್ಚಲು ಕೋಣೆಯೊಳಗೆ ಹೊಕ್ಕು ತಣ್ಣೀರನ್ನು ತಲೆಮೇಲೆ ಹೊಯ್ದುಕೊಳ್ಳುತ್ತಿದ್ದೆ. ಉಪವಾಸ ವ್ರತ ಮಾಡುತ್ತಿದ್ದೆ. ಯಾರೊಂದಿಗು ಹೇಳಲಾಗದ ಈ ಒಂಟಿಯಾತನೆಯಲ್ಲಿ ನಾನು ಬೆಂದು ಹೋಗುತ್ತಿದ್ದಾಗ ನನ್ನ ದೊಡ್ಡಪ್ಪನನ್ನು ಭೇಟಿ ಆಗಲು ನೀವು ಮನೆಗೆ ಬಂದಿರಿ. ನನ್ನನ್ನು ನೋಡಿದಿರಿ. ನನ್ನ ಕಥೆಯೆಲ್ಲಾ ನಿಮಗೆ ತಿಳಿಯಿತು. ಪಿಂಕಿಗೆ ಈಗ ತಿಳಿಯುವುದೇ ಬೇಡಾ, ಪ್ರಾಯಕ್ಕೆ ಬಂದಾಗ ತಿಳಿದೇ ತಿಳಿಯುತ್ತದೆ… ಎಂದೆಲ್ಲಾ ಅಮ್ಮ ಸಮಧಾನಿಸಿ ನಿಮ್ಮೊಂದಿಗೆ ಮದುವೆಗೆ ಒಪ್ಪಿಸಿದರು. ನಾವಿಂದು ಗುಟ್ಟಾಗಿ ದಾಂಪತ್ಯ ನಡೆಸುತ್ತಿದೇವೆ… ಇನ್ನು ಎಷ್ಟು ಸಮಯ ಹನೀಫ್…? ಈ ರೀತಿ ಗುಟ್ಟು ಇಡುವುದು? ಪ್ರತೀ ಗುರುವಾಗ ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಪ್ರಶ್ನಿಸುತ್ತಿದ್ದಾಳೆ ಮಗಳು. ಸುಳ್ಳು ಹೇಳಿ ಬರುವುದೇ ಕಷ್ಟವಾಗುತ್ತಿದೆ. ನಾನು ನಿಮ್ಮೊಂದಿಗೆ ಮೊಬೈಲ್ನಲ್ಲಿ ಹರಟುತ್ತಿದ್ದರೆ ಸಂಶಯದಿಂದ ನೋಟ ಹರಿಸುತ್ತಿದ್ದಾಳೆ. ಅವಳಿಗೆ ಸತ್ಯ ತಿಳಿಸಿ ಬಿಡಬೇಕು ಎಂದು ಈಗೀಗ ಅನಿಸುತ್ತಿದೆ. ಆಕೆ ದೊಡ್ಡವಳಾಗಿದ್ದಾಳೆ… ಅರ್ಥ ಮಾಡಿಕೊಳ್ಳಬಹುದೂ…
ಸಾಯಿರಾಳ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ಹನೀಫ್ ಪತ್ನಿಯನ್ನು ಸಮಧಾನಿಸಿದ. ಪಿಂಕಿಗೆ ಮದುವೆ ಸಮಯ ಬಂದಾಗ ನಾನು ಮುಂದೆ ಬರಲೇಬೇಕಲ್ಲವೇ? ಸಹನೆ ವಹಿಸು.. ಅವಳು ಈ ಸತ್ಯವನ್ನು ಒಪ್ಪಿಕೊಳ್ಳುವಳು. ಸಾಯಿರಾ ಅವನ ಎದೆಗೆ ಮುಖ ಒತ್ತಿ ಕಣ್ಣು ಮುಚ್ಚಿದಳು. ಪುರುಷನ ಆಸರೆ ಇಲ್ಲದೇ ಬದುಕುವುದೇ ಕಷ್ಟ… ನಿಮ್ಮಂತಹ ಒಳ್ಳೆಯ ಸಂಗಾತಿಯನ್ನು ನಾನು ಪಡೆದುಕೊಂಡದ್ದು ನನ್ನ ಪುಣ್ಯ. ಮನಸ್ಸಲ್ಲೇ ಪಿಸುಗುಟ್ಟಿಕೊಂಡಳು.
ಮಮ್ತಾಜ್ ಮಲಗಿದ್ದಲ್ಲಿಂದಲೇ ಮೊಬೈಲ್ಗೆ ಕರೆ ಮಾಡಿದಳು. ಪತ್ನಿಯ ನಂಬರ್ ನೋಡಿ ಹನೀಫ್ ಆತುರದಿಂದ ರಿಸೀವ್ ಮಾಡಿದ.
ರೀ… ನೀವು ಬರುವಾಗ ನನಗೆ ಎರಡು ನೈಟ್ ಡ್ರೆಸ್ ತನ್ನಿ. ಮಂಗಳೂರಿನಲ್ಲಿ ಒಳ್ಳೆಯ ನೈಟಿ ಸಿಗುತ್ತದೆ. ಬರಲು ತುಂಬಾ ತಡಮಾಡ ಬೇಡಿ… ನನ್ನ ಮಾತ್ರೆಗಳನ್ನೂ ಮರೆಯದೇ ತಂದು ಬಿಡಿ.
ಓ.ಕೆ… ಮಮ್ತಾ, ಡ್ರೆಸ್ ರ್ತೇನೆ. ಬೇರೆ ಏನಾದರೂ ಬೇಕಾ? ಊಟ ಮಾಡು… ನನ್ನನ್ನು ಕಾಯುತ್ತಾ ಕುಳಿತಿರಬೇಡಾ… ಹನೀಫ್ ಪತ್ನಿಗೆ ಹೇಳುತ್ತಿರುವುದನ್ನು ಕೇಳಿ ಸಾಯಿರಾ ಶಬ್ದವಾಗದಂತೇ ಕುಳಿತಳು.
ಹನೀಫ್ ಸಾಯಿರಾಳತ್ತ ತಿರುಗಿ, “ಚಿನ್ನಾ… ನನಗೆ ಎರಡು ನೈಟ್ ಡ್ರೆಸ್ ಖರೀದಿ ಮಾಡಬೇಕು ನಿನಗೆ ತಿಳಿದಿರುತ್ತದೆ… ಹೆಂಗಸರು ಯಾವ ರೀತಿಯ ಡ್ರೆಸ್ ಹಾಕುವುದೆಂದೂ…”
ನಿಮ್ಮ ಪತ್ನಿ ತುಂಬಾ ದಪ್ಪದ ಹೆಂಗಸಾ? ಸಾಯಿರಾ ಕೇಳಿದಳು.
ಹೌದೂ… ಇದೀಗ ದಪ್ಪ ಆಗಿರುವುದು, ಪಕ್ಷವಾತಕ್ಕೆ ಈಡಾದ ಬಳಿಗೆ ಹಾಸಿಗೆಯ ರೋಗಿಯಾಗಿ ಮಲಗಿದ್ದಲ್ಲೇ ಇದ್ದಾಗ ವ್ಯಾಯಾಮ ಇಲ್ಲ… ದಪ್ಪ ಆಗುತ್ತಾ ಹೋದಳು. ಮೂರು ವರ್ಷದಿಂದ ನಾನೇ ಅವಳ ಸೇವೆ ಮಾಡುತ್ತಿರುವುದು. ಮಗ ಸೊಸೆ ಅಮೇರಿಕಾದಿಂದ ಎಂದಾದರೂ ಬಂದಾಗ ತುಂಬಾ ಖುಶಿಯಲ್ಲಿರುತ್ತಾಳೆ. ಈಗ ನಾನು ಅವಳ ಕಣ್ಣ ಮುಂದೆನೇ ಇರಬೇಕು. ಅದಕ್ಕೇ ಎಲ್ಲಾ ವ್ಯಾಪಾರವನ್ನು ತಮ್ಮಂದಿರಿಗೆ ವಹಿಸಿ ಅವಳೊಂದಿಗೆ ಇರುವುದು. ಗುರುವಾರದ ದಿನ ಮಾತ್ರ ಮಂಗಳೂರಿನಲ್ಲಿ ಕೆಲಸ ಇದೆಯೆಂದು ಹೇಳಿ ಬರುತ್ತೇನೆ. ನಿನ್ನನ್ನು ಒಮ್ಮೆ ನಮ್ಮ ಕಾರ್ಕಳದ ಮನೆಗೆ ಕರೆದೊಯ್ಯ ಬೇಕೆಂದು ಆಸೆ ಇದೆ. ಆದ್ರೆ… ಮಮ್ತಾಳಿಗೆ ನಿನ್ನನ್ನು ಏನೆಂದು ಪರಿಚಯಿಸುವುದು? ಅವಳ ಪತಿ ಎಂದಿಗೂ ಇನ್ನೊಂದು ಹೆಂಗಸಿನತ್ತ ನೋಡದಂತಹ ಏಕಪತ್ನೀ ವ್ರತನಾಗಿರಬೇಕೆಂದು ಅವಳು ಬಯಸುತ್ತಾಳೆ. ನಮ್ಮ ದಾಂಪತ್ಯ ಮಧುರವಾಗಿದೆ. ನಾನು ಹೆಣ್ಣಿನ ಸಂಗ ಇಲ್ಲದೇ ಹೇಗೆ ಜೀವಿಸುತ್ತಿದ್ದೇನೆಂದು ಅವಳು ಯೋಚಿಸುವುದೇ ಇಲ್ಲ. ಅವಳ ಮಟ್ಟಿಗೆ ನಾನು ಐವತ್ತರ ಪ್ರಾಯದವನು ನನಗೆ ಸೆಕ್ಸ್ನ ಅಗತ್ಯವಿಲ್ಲ ಎಂದು ತಿಳಿದರಲೂ ಬಹುದು. ಅವಳಿಗೆ ಶುಗರ್, ಬಿ.ಪಿ. ಕೂಡಾ ಇದೆ. ಆದರಿಂದ ನಾನು ಅವಳಿಗೆ ಯಾವುದೇ ಮಾನಸಿಕ ನೋವು ಕೊಡದೇ ಸತ್ಯವನ್ನು ಮುಚ್ಚಿಟ್ಟು ಬಿಟ್ಟೆ. ಕೆಲವು ವೇಳೆ ಒಬ್ಬರ ಸುಳ್ಳು ಮುಚ್ಚುಮರೆಯ ಇನ್ನೋರ್ವರಿಗೆ ಬದುಕಲ್ಲಿ ಸಂತಸ ನೀಡುತ್ತದೆ. ಅವಳು ಆಕೆಯ ನಂಬಿಕೆಯಲ್ಲಿ ನೆಮ್ಮದಿಯಲ್ಲಿದ್ದಾಳೆ ಎಂದಾದರೂ ತಿಳಿಯಬಹುದೂ… ನೋಡುವ.
ಪಿಂಕಿ ಹದಿಹರೆಯಕ್ಕೆ ಕಾಲಿಟ್ಟಳು. ಹನೀಫ್ನ ಗೆಳೆಯನ ಮಗ ಇಂಜಿನಿಯರ್ ತನ್ನ ಮಲ ಮಗಳಾದ ಪಿಂಕಿಯ ಫೋಟೋವನ್ನು ಹನೀಫ್ ತೋರಿಸಿದಾಗ ಖುಶಿಯಿಂದಲೇ ವಧುವನ್ನು ಒಪ್ಪಿಕೊಂಡ. ಹೆಣ್ಣು ನೋಡುವ ಶಾಸ್ತçವೂ ಮುಗಿದು ಮದುವೆಗೆ ದಿನ ನಿಗದಿಯಾಯಿತು. ಮಲ ಮಗಳ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹನೀಫ್ ವಹಿಸಿಕೊಂಡಿದ್ದ. ಮದುವೆಯ ಕಾಗದ ಪ್ರಿಂಟ್ ಆಗಲು ಬಾಕಿ ಇತ್ತು. ಪಿಂಕಿ ತಾನೇ ಮದುವೆ ಕಾಗದದ ರೂಪರೇಖೆಯನ್ನು ಸಿದ್ಧಪಡಿಸಿ ಅಮ್ಮನ ಕೈಗೆ ನೀಡಿದಳು.
ಅಮ್ಮಾ… ಇದರಲ್ಲಿ ಬರೆದಂತೇ ಪ್ರಿಂಟ್ ಆಗಲಿ. ನನ್ನ ಗೆಳತಿಯರೆಲ್ಲಾ ಬರುತ್ತಾರೆ. ನಾವು ಹೆಚ್ಚು ಜನರನ್ನು ಆಮಂತ್ರಿಸುವುದು ಬೇಡಾ. ಮದುವೆಗೆ ಬಹಳ ಖರ್ಚು ಆಗುತ್ತಾ ಇದೆ. ಈಗಲೇ ನನ್ನ ಬಂಗಾರ, ವಸ್ತçಕ್ಕೆಂದೇ ಎರಡುವರೆ ಲಕ್ಷ ಖರ್ಚು ಮಾಡಿದ್ದಿ. ಅದ್ಧೂರಿ ಮದುವೆ ಬೇಡಾ…
ಮಗಳು ಹೇಳಿದಾಗ ಸಾಯಿರಾ ಮದುವೆಯ ಕಾಗದತ್ತ ಕಣ್ಣು ಹಾಯಿಸಿದಳು. ಪಿಂಕಿ ಹಾಗೂ ವರನ ಹೆಸರಿನ ಕೆಳಗೆ ಮಿಸ್ಟರ್ ಹನೀಫ್ ಮಿಸೆಸ್ ಸಾಯಿರಾ ಎಂದು ಪ್ರಿಂಟಾಗಿರುವ ಅಕ್ಷರಗಳನ್ನು ನೋಡಿ ಸಾಯಿರಾ ದಿಗ್ಭçಮೆಯಿಂದ ಮಗಳತ್ತ ನೋಡಿದಳು.
ಯಾಕಮ್ಮಾ… ಈ ರೀತಿ ಹೆದರಿ ಬಿಟ್ಟೆ! ನನಗೆ ಎಲ್ಲಾ ಗೊತ್ತಾಗಿದೆ. ನನ್ನನ್ನು ಬೆನ್ನ ಹಿಂದೆ ನಿಂತು ಪೋಷಿಸುವ ಓರ್ವ ಅಪ್ಪ ಇರುವುದು ನೀನು ತಿಳಿಸದೇ ಹೋದ್ರೂ ನಾನು ಪತ್ತೆ ಹಚ್ಚಿದೆ. ಇಂದು ನಾನು ವಿದ್ಯಾವಂತಳಾಗಿ ನಿಂತು, ಒಳ್ಳೆಯ ಗಂಡು ನನ್ನನ್ನು ಮದುವೆ ಆಗಲು ಸಿದ್ಧವಾದದ್ದು ನನ್ನ ಮದುವೆಯ ಜವಾಬ್ದಾರಿ ಎಲ್ಲವನ್ನೂ ನಿರ್ವಹಿಸಿದ ಆ ಪುಣ್ಯಾತ್ಮ ನನಗೆ ಜನ್ಮ ನೀಡದ ತಂದೆ ಆಗಿರಬಹುದೂ… ಆದ್ರೆ ನನ್ನ ಅಮ್ಮನ ಬದುಕಿಗೆ ಆಸರೆಯಾಗಿ ನಿಂತ ಅವರು ನನಗೆ ತಂದೆ ಸಮಾನ ತಾನೆ? ನಾನು ಅಜ್ಜಿಯೊಂದಿಗೆ ಎಲ್ಲಾ ಕೇಳಿ ತಿಳಿದುಕೊಂಡೆ. ನಾನು ಎಷ್ಟು ಸ್ವಾರ್ಥಿ ಮಗಳಲ್ಲಾ… ಅಮ್ಮಾ… ಬುದ್ಧಿ ಇಲ್ಲದ ವಯಸ್ಸಲ್ಲಿ ನಾನು ಏನೋ ಅಂದಿದ್ದಕ್ಕೆ ನೀನು ನನ್ನ ಮುಂದೆ ರಹಸ್ಯ ಬಾಯಿ ಬಿಡಲಿಲ್ಲ. ಅಮ್ಮಾ… ನಾನು ಅವರನ್ನು ಅಪ್ಪಾ’ ಎಂದು ಕರೆಯಬಹುದೇ? ಸಾಯಿರಾ ಕುಳಿತಲ್ಲಿಂದ ಒಮ್ಮೆಲೇ ಎದ್ದು ನಿಂತು ಮಗಳನ್ನು ಬಿಗಿಯಾಗಿ ಅಪ್ಪಿ ಹಿಡಿದು ಬಿಕ್ಕಳಿಸಿದಳು. ಅಮ್ಮಾ… ನನಗೆ ನೆಮ್ಮದಿಯಾಯಿತು. ನಾನು ವಿವಾಹ ಆಗಿ ಹೋದ ನಂತರ ನೀನು ಒಂಟಿಯಾಗಿರಲಾರೆ. ನನಗೆ ಅವರನ್ನು ನೋಡಬೇಕಮ್ಮಾ… ಸಾಯಿರಾಳ ಮೊಬೈಲ್ ರಿಂಗಾಯಿತು. ಹನೀಫ್ನ ನಂಬರ್ ನೋಡಿ ಖುಶಿಯಿಂದ ಸಾಯಿರಾ ಮಗಳತ್ತ ನೋಡಿ, “ನೀನು ಕೇಳುವಾಗಲೇ ನಿನ್ನ ಅಪ್ಪನ ಕರೆ ಬಂತು… ಮಾತನಾಡು ಮಗಳೇ…” ಎಂದು ಮೊಬೈಲ್ ನೀಡಿದಳು. ಪಿಂಕಿ ನಡುಗುವ ಕೈಯಿಂದ ಮೊಬೈಲ್ ತಗೊಂಡು ಕಿವಿಗೆ ಒತ್ತಿಕೊಂಡಳು.
ಹಲೋ… ಆಚೆಯಿಂದ ಧನಿ ಕೇಳಿ ಬಂತು. ಪಿಂಕಿ ಹೆದರುತ್ತಲೇ… “ಹಲೋ ಅಸ್ಸಾಲಾಮ್ ಅಲೈಕುಮ್ ಡ್ಯಾಡ್… ನಾನು ಪಿಂಕಿ ಮಾತನಾಡುವುದೂ…” ಎಂದಳು. ಏನೆAದೇ…! ಡ್ಯಾಡ್!? ಇನ್ನೊಮ್ಮೆ ಹೇಳೂ ಪಿಂಕೀ… ಹನೀಫ್ನ ಧ್ವನಿ ಭಾರವಾಗಿ ಗದ್ಗದಿತವಾಗಿತ್ತು. ಹಾಯ್… ಡ್ಯಾಡ್! ಹೌ ಆರ್ ಯೂ? ನನಗೆ ಎಲ್ಲಾ ವಿಷಯ ತಿಳಿದಿದೆ. ನಿಮ್ಮನ್ನು ಭೇಟಿ ಆಗಲು ಕಾತುರಿಸುತ್ತಿದ್ದೇನೆ ಡ್ಯಾಡ್… ಥ್ಯಾಂಕ್ಸ್, ಅಲ್ಹಮ್ದುಲಿಲ್ಲಾಹ್! ನನ್ನ ಎದೆಯ ಭಾರ ಕಡಿಮೆ ಆಯಿತು. ಅಂದಹಾಗೇ… ಒಂದು ವಿಷಯ ಹೇಳಲು ಕಾಲ್ ಮಾಡಿದ್ದೆ, ಅರ್ಜೆಂಟ್… ಅಮ್ಮನಿಗೆ ಸೆಲ್ ನೀಡೂ… ಬೇಗಾ… ಎಂದರು ಆತುರದಿಂದ. ಅಮ್ಮಾ… ಅಪ್ಪನಿಗೆ ಏನೋ ಅರ್ಜೆಂಟ್ ಮಾತನಾಡಬೇಕಂತೇ ನಿನ್ನ ಬಳಿ… ಹಲೋ… ಏ… ಏನೂರೀ…? ಸಾಯಿರಾ ಗಾಬರಿಯಿಂದ ಕೇಳಿದಳು. ನೀನು ಬೇಗನೇ ಹೊರಟು ಸಿಟಿ ಆಸ್ಪತ್ರೆಗೆ ಬಾ. ಮಮ್ತಾಜ್ ಸೀರಿಯಸ್ ಆಗಿದ್ದಾಳೆ. ಒಮ್ಮೆ ಅವಳನ್ನು ನೋಡು, ಡಾಕ್ಟರ್ ಭರವಸೆ ಬಿಟ್ಟಿದ್ದಾರೆ. ನಿಮ್ಮವರಿಗೆ ಸುದ್ಧಿ ಮುಟ್ಟಿಸಲು ಹೇಳಿದ್ರು… ನೀನು ಪಿಂಕಿ ಒಟ್ಟಿಗೇ ಬೇಗನೇ ಬಂದು ಬಿಡು. ಸಾಯಿರಾ
ಮಗಳೊಂದಿಗೆ ಆಸ್ಪತ್ರೆಗೆ ಬಂದಾಗ ಐ.ಸಿ. ರೂಮಲ್ಲಿ ಹನೀಫ್ ಅಳುತ್ತಾ ಮಮ್ತಾಜ್ನ ಪಕ್ಕ ನಿಂತಿದ್ದರು. ಸಾಯಿರಾ ಮೆಲ್ಲನೇ ಮಮ್ತಾಜ್ನ ಹತ್ತಿರ ನಡುಗುತ್ತಾ ನಿಂತಳು. ಮಮ್ತಾಜ್ನ ಕಣ್ಣು ನಿರೀಕ್ಷಿಸುತ್ತಿತ್ತು… ಆಕೆಯನ್ನೂ ಸಾಯಿರಾಳನ್ನು ಸನ್ನೆಯಿಂದ ಹತ್ತಿರ ಕರೆದಳು. ನೀನೂ.. ಸಾ…ಯಿ…ರಾ… ತಾನೆ? ಆಕೆಯ ಕೈಗಳನ್ನು ಮೆಲ್ಲನೇ ಮೇಲೆತ್ತಿ ಕೇಳಿದಳು. ನನಗೆ ಗೊತ್ತಿದೇ… ಹನೀಫ್ನತ್ತ ಕೈ ತೋರಿಸಿ ಆಕೆ ನಸು ನಗು ಬೀರಿದಳು. ಮೊಬೈಲ್ನಲ್ಲಿತ್ತು ನಿನ್ನ ಹೆಸರು. ತುಂಬಾ ಒಳ್ಳೆಯವರು ನನ್ನ ಗಂಡ. ಅವರನ್ನು ಕೈ ಬಿಡಬೇಡಾ… ಒಂದು ವರುಷದಿಂದ ನಿನ್ನನ್ನು ನೋಡಲು ಬಯಸುತ್ತಿದ್ದೆ… ಇಂದು ಕೊನೆಗಳಿಗೆಯಲ್ಲಿ ಕಾಣುವಂತಾಯಿತೂ… ನನ್ನ ಮಗ… ಸಲ್ಮಾನ್ಗೆ ನೀನುಅಮ್ಮ’ ಆಗಬೇಕೂ… ನನ್ನ ಮನೆಯಲ್ಲಿ… ಇರಬೇಕೂ… ಮಮ್ತಾಜ್ ಏದುರಿಸಿರು ಬಿಡ ತೊಡಗಿದಳು. ಕಣ್ಣುಗಳು ನೋಟ ನೆಟ್ಟಿರುವಂತೇ ದೇಹ ತಟಸ್ಥವಾಯಿತು.
ಸಾಯಿರಾಳ ಕೈಯನ್ನು ಬಿಗಿಯಾಗಿ ಹಿಡಿದು ಮಮ್ತಾಜ್ಳ ತೆರೆದ ಕಣ್ಣನ್ನು ಮುಚ್ಚಿದ ಸಾಯಿರಾ ಕಂಬನಿ ಒರೆಸಿಕೊಂಡು ಪತಿಯತ್ತ ನೋಡಿದಳು. ದುಃಖದಿಂದ ಕುಸಿದ ಹನೀಫ್ರನ್ನು ಪಿಂಕಿ ಹಿಡಿದುಕೊಂಡು ಸಂತೈಯಿಸುತ್ತಿರುವುದು ಕಾಣಿಸಿತೂ… ಡ್ಯಾಡ್… ಧೈರ್ಯ ವಹಿಸಿಕೊಳ್ಳಿ… ಮಗಳ ಮಾತುಗಳು ಅವರ ಮನಸ್ಸಿಗೆ ಹಾಯೆನಿಸಿದವು.
ಶಹನಾಝ್ ಎಂ.




