ನವದೆಹಲಿ: ವಿದೇಶಗಳಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ತಂದು ಭಾರತದಲ್ಲಿ ಹೊಸ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿದ್ದ ಬೃಹತ್ ದಂಧೆಯನ್ನು ದೆಹಲಿ ಪೊಲೀಸರು ಬಯಲಿಗೆಳೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 43 ಕೋಟಿ ರೂಪಾಯಿ ಮೌಲ್ಯದ ಎಕ್ಸ್ಪೈರಿ ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ನಡೆಸಿದ ಈ ದಾಳಿಯಲ್ಲಿ 43,000 ಕೆಜಿಗೂ ಅಧಿಕ ಆಹಾರ ಪದಾರ್ಥಗಳು ಮತ್ತು 14,000 ಲೀಟರ್ ಪಾನೀಯಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ ಅಂತರಾಷ್ಟ್ರೀಯ ಬ್ರಾಂಡ್ಗಳ ಚಾಕೊಲೇಟ್, ಬಿಸ್ಕೆಟ್, ಸಾಸ್, ಚೀಸ್, ಪಾಸ್ಟಾ ಮತ್ತು ಎನರ್ಜಿ ಡ್ರಿಂಕ್ಸ್ಗಳು ಸೇರಿವೆ.
ತನಿಖೆಯ ಪ್ರಕಾರ, ಈ ಜಾಲದ ಮಾಸ್ಟರ್ಮೈಂಡ್ ಅಟಲ್ ಜೈಸ್ವಾಲ್ ಎಂಬುವವನು ಯುಕೆ, ಅಮೆರಿಕ ಮತ್ತು ದುಬೈನಂತಹ ದೇಶಗಳಿಂದ ಎಕ್ಸ್ಪೈರಿ ದಿನಾಂಕ ಮುಗಿದಿರುವ ಅಥವಾ ಮುಗಿಯುವ ಹಂತದಲ್ಲಿರುವ ಆಹಾರ ಪದಾರ್ಥಗಳನ್ನು ಅತ್ಯಂತ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುತ್ತಿದ್ದನು.
ಈ ಆಹಾರ ಪದಾರ್ಥಗಳನ್ನು ದೆಹಲಿಯ ಸಾದರ್ ಬಜಾರ್ ಮತ್ತು ಪಹರಿ ಧೀರಜ್ ಪ್ರದೇಶದ ರಹಸ್ಯ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಅಲ್ಲಿ ವಿಶೇಷ ಕೆಮಿಕಲ್ ದ್ರಾವಣಗಳನ್ನು ಬಳಸಿ ಪ್ಯಾಕೆಟ್ಗಳ ಮೇಲಿದ್ದ ಹಳೆಯ ಎಕ್ಸ್ಪೈರಿ ದಿನಾಂಕವನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗುತ್ತಿತ್ತು. ನಂತರ ನವೀನ ಮಾದರಿಯ ಲೇಸರ್ ಮಶಿನ್ ಬಳಸಿ ಹೊಸ ದಿನಾಂಕ ಮತ್ತು ನಕಲಿ ಬಾರ್ಕೋಡ್ಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು.
ಬಂಧಿತ ಆರೋಪಿಗಳನ್ನು ಅಟಲ್ ಜೈಸ್ವಾಲ್, ಶಿವಕುಮಾರ್, ವಿಶ್ವಜಿತ್ ಧಾರಾ, ವಿನೋದ್, ಅರುಣ್ ಕುಮಾರ್, ವಿಜಯ್ ಕಾಂತ್ ಮತ್ತು ಶಮೀಮ್ ಎಂದು ಗುರುತಿಸಲಾಗಿದೆ. ಈ ತಂಡವು ಕಳೆದ ಕೆಲವು ಸಮಯದಿಂದ ಜನಪ್ರಿಯ ವಿದೇಶಿ ಬ್ರಾಂಡ್ಗಳ ಹೆಸರಿನಲ್ಲಿ ಈ ಹಳೆಯ ಆಹಾರವನ್ನು ದೇಶದ ವಿವಿಧ ನಗರಗಳ ಪ್ರಮುಖ ಅಂಗಡಿಗಳು ಮತ್ತು ಮಾಲ್ಗಳಿಗೆ ಸರಬರಾಜು ಮಾಡುತ್ತಿತ್ತು.
ಇಂತಹ ಅವಧಿ ಮೀರಿದ ಆಹಾರ ಪದಾರ್ಥಗಳ ಸೇವನೆಯಿಂದ ವಿಷಾಹಾರ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಸದ್ಯ ಬಂಧಿತರ ವಿರುದ್ಧ ವಂಚನೆ ಮತ್ತು ಆಹಾರ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮುಖ್ಯವಾಗಿ ವಿದೇಶಿ ಬ್ರಾಂಡ್ಗಳ ಮೇಲೆ ವ್ಯಾಮೋಹ ಹೊಂದಿರುವ ಯುವಜನತೆಯನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಯುತ್ತಿತ್ತು. ಕಡಿಮೆ ಬೆಲೆಗೆ ಅಥವಾ ಭರ್ಜರಿ ರಿಯಾಯಿತಿಯಲ್ಲಿ (Discount) ಸಿಗುವ ಇಂಪೋರ್ಟೆಡ್ ಚಾಕೊಲೇಟ್ ಮತ್ತು ಎನರ್ಜಿ ಡ್ರಿಂಕ್ಸ್ಗಳನ್ನು ಖರೀದಿಸುವ ಮುನ್ನ ಯುವಜನತೆ ಎಚ್ಚರವಹಿಸಬೇಕಿದೆ.
ಕೇವಲ ಹಣ ಉಳಿಸುವ ಆಸೆಗೆ ಬಿದ್ದು ಇಂತಹ ವಸ್ತುಗಳನ್ನು ಖರೀದಿಸುವುದು ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಇಂತಹ ಅವಧಿ ಮೀರಿದ ಆಹಾರ ಪದಾರ್ಥಗಳ ಸೇವನೆಯಿಂದ ಕಿಡ್ನಿ ಸಮಸ್ಯೆ, ಲಿವರ್ ವೈಫಲ್ಯ ಮತ್ತು ತೀವ್ರವಾದ ಫುಡ್ ಪಾಯಿಸನಿಂಗ್ ಉಂಟಾಗುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆದ್ದರಿಂದ ಲೇಬಲ್ ಸರಿಯಾಗಿಲ್ಲದ ಅಥವಾ ಅತಿಯಾದ ರಿಯಾಯಿತಿ ಇರುವ ವಿದೇಶಿ ಉತ್ಪನ್ನಗಳ ಬಗ್ಗೆ ಜಾಗರೂಕರಾಗಿರಿ.



