ಭಾರತೀಯ ಖಾದ್ಯಗಳ ರುಚಿಗೆ ಮನಸೋಲದವರೇ ಇಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಘಮಘಮಿಸುವ ಮಸಾಲೆ ಮತ್ತು ವೈವಿಧ್ಯಮಯ ಖಾದ್ಯಗಳು ಜನರನ್ನು ತನ್ನತ್ತ ಸೆಳೆಯುತ್ತವೆ.
ಭಾರತದ ರುಚಿಕರ ನಗರಗಳು ಎಂದ ಕೂಡಲೇ ನಮಗೆ ನೆನಪಾಗುವುದು ಹೈದರಾಬಾದಿನ ಬಿರಿಯಾನಿ ಅಥವಾ ದೆಹಲಿಯ ಚಾಟ್ಸ್. ಆದರೆ ಇವೆಲ್ಲವನ್ನೂ ಹಿಂದಿಕ್ಕಿ ಈಗ ಭಾರತದ ಮತ್ತೊಂದು ನಗರ ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದೆ. ವಿಶ್ವಪ್ರಸಿದ್ಧ ‘ಟೇಸ್ಟ್ ಅಟ್ಲಾಸ್’ ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವದ ಅತ್ಯುತ್ತಮ ಆಹಾರದ ನಗರಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಅಚ್ಚರಿಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಈ ಜಾಗತಿಕ ಪಟ್ಟಿಯಲ್ಲಿ ಕೋಲ್ಕತ್ತಾ 24ನೇ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತದ ಅತ್ಯಂತ ರುಚಿಕರ ಆಹಾರದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ, ಹೈದರಾಬಾದ್ ಮತ್ತು ದೆಹಲಿಯಂತಹ ನಗರಗಳನ್ನು ಕೆಳಕ್ಕೆ ತಳ್ಳಿ ಕೋಲ್ಕತ್ತಾ ಈ ಗೌರವ ಪಡೆದಿರುವುದು ಆಹಾರ ಪ್ರೇಮಿಗಳಲ್ಲಿ ಸಂಭ್ರಮ ತಂದಿದೆ. ಇಲ್ಲಿನ ಸಿಹಿ ತಿಂಡಿಗಳಾದ ರಸಗುಲ್ಲಾ ಮತ್ತು ಮಿಸ್ಟಿ ದೋಯ್ ಮಾತ್ರವಲ್ಲದೆ, ಕಟಿಕಾಬಾಬ್ ಮತ್ತು ಅಲ್ಲಿನ ವಿಶಿಷ್ಟ ಶೈಲಿಯ ಬಿರಿಯಾನಿ ವಿಶ್ವದಾದ್ಯಂತ ಇರುವ ಆಹಾರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೋಲ್ಕತ್ತಾದ ಜೊತೆಗೆ ಮುಂಬೈ 35ನೇ ಸ್ಥಾನ, ಹೈದರಾಬಾದ್ 39ನೇ ಸ್ಥಾನ ಹಾಗೂ ದೆಹಲಿ ಮತ್ತು ಚೆನ್ನೈ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಶ್ವದಾದ್ಯಂತ ಇರುವ ಲಕ್ಷಾಂತರ ಪ್ರವಾಸಿಗರ ರೇಟಿಂಗ್ ಮತ್ತು ಸ್ಥಳೀಯ ಖಾದ್ಯಗಳ ರುಚಿಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇಟಲಿಯ ರೋಮ್ ನಗರ ಜಗತ್ತಿನಲ್ಲೇ ನಂಬರ್ ಒನ್ ಆಹಾರದ ನಗರವಾಗಿ ಹೊರಹೊಮ್ಮಿದೆ. ಭಾರತದ ನಗರವೊಂದು ಜಾಗತಿಕ ಮಟ್ಟದಲ್ಲಿ ಟಾಪ್ 25ರೊಳಗೆ ಸ್ಥಾನ ಪಡೆದಿರುವುದು ನಮ್ಮ ದೇಶದ ಶ್ರೀಮಂತ ಆಹಾರ ಪದ್ಧತಿಗೆ ಸಂದ ಗೌರವವಾಗಿದೆ



