”ಮಕ್ಕಳಲ್ಲವೇ, ಅವರು ಸಿಹಿ ಮತ್ತು ಮಿಠಾಯಿಗಳನ್ನು ತಿನ್ನಲಿ ಬಿಡಿ” ಎಂದು ಹೇಳುವವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಆದರೆ ನೆನಪಿರಲಿ, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಆರೋಗ್ಯವೇ ನಮಗೆ ಮುಖ್ಯ.
ಸಿಹಿ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಕೇಳಲೇಬೇಡಿ. ಚಾಕೊಲೇಟ್, ಕೇಕ್, ಸಿಹಿತಿಂಡಿ ಮತ್ತು ತಂಪು ಪಾನೀಯಗಳೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. “ಮಕ್ಕಳೇ ತಾನೇ, ಸ್ವಲ್ಪ ಹೆಚ್ಚು ತಿಂದರೆ ಏನಾಗುತ್ತದೆ?” ಎಂದು ನಿರ್ಲಕ್ಷಿಸಬೇಡಿ. ದೊಡ್ಡವರಂತೆ ಅತಿಯಾದ ಸಿಹಿ ಸೇವನೆಯು ಮಕ್ಕಳ ದೈನಂದಿನ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಅತಿಯಾದ ಸಿಹಿ ಸೇವನೆಯಿಂದ ಆಗುವ ತೊಂದರೆಗಳು:
ಹಸಿವು ಕಡಿಮೆಯಾಗುವುದು: ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳನ್ನು ತಿನ್ನುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ. ಇದರಿಂದ ಅವರು ಪೌಷ್ಟಿಕ ಆಹಾರಗಳನ್ನು ಸೇವಿಸಲು ಹಿಂಜರಿಯುತ್ತಾರೆ.
ಪೋಷಕಾಂಶಗಳ ಕೊರತೆ: ಸರಿಯಾದ ಊಟ ಮಾಡದಿದ್ದರೆ ಮಗುವಿನ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಕಬ್ಬಿಣಾಂಶ ಮತ್ತು ನಾರಿನಂಶದಂತಹ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

ಆರೋಗ್ಯ ಸಮಸ್ಯೆಗಳು:
ಹೆಚ್ಚು ಸಿಹಿ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಅಲ್ಲದೆ, ಹಗಲಿನಲ್ಲಿ ಅತಿಯಾದ ಸಕ್ಕರೆ ಸೇವನೆಯು ಮಕ್ಕಳ ನಿದ್ರೆಯ ಮೇಲೂ ಪರಿಣಾಮ ಬೀರಬಹುದು.
ಇದನ್ನು ನಿಯಂತ್ರಿಸುವುದು ಹೇಗೆ?
ಊಟದ ನಂತರ ಸಿಹಿ ನೀಡಿ: ಒಂದು ವೇಳೆ ಮಗು ಸಿಹಿ ಕೇಳಿದರೆ, ಊಟದ ನಂತರ ಸ್ವಲ್ಪ ನೀಡುವ ಅಭ್ಯಾಸ ಮಾಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವ ಪ್ರಮಾಣ ನಿಧಾನವಾಗುತ್ತದೆ.
ಆಹಾರ ಕ್ರಮದ ಮೇಲೆ ನಿಗಾ ಇರಲಿ: ದಿನವಿಡೀ ಮಗುವಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಮತ್ತು ಸಾಕಷ್ಟು ನೀರು ಕುಡಿಸುವ ಅಭ್ಯಾಸ ಮಾಡಿಸಿ. ಹೊಟ್ಟೆ ತುಂಬಿದ್ದರೆ ಅವರಿಗೆ ಸಿಹಿ ತಿನ್ನುವ ಹಂಬಲ ತಾನೇ ಕಡಿಮೆಯಾಗುತ್ತದೆ.
ಬಹುಮಾನವಾಗಿ ಸಿಹಿ ನೀಡಬೇಡಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದಾಗ ಅಥವಾ ಯಾವುದಾದರೂ ಕೆಲಸ ಮಾಡಿದಾಗ ಸಿಹಿತಿಂಡಿ, ಚಾಕೊಲೇಟ್ ಅಥವಾ ಐಸ್ ಕ್ರೀಮ್ ನೀಡುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ “ಸಿಹಿ ತಿನ್ನುವುದು ಒಂದು ಬಹುಮಾನ ಅಥವಾ ಒಳ್ಳೆಯದು” ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿ ಮೂಡುತ್ತದೆ.
ಎಲ್ಲಾ ಸಂದರ್ಭಗಳಲ್ಲೂ ಜಾಗರೂಕರಾಗಿರಿ: ಮನೆಯಲ್ಲಿ ಸಮಾರಂಭ ಅಥವಾ ಮದುವೆ ಇದ್ದಾಗಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಿತವಾಗಿ ಸಿಹಿ ತಿನ್ನಲು ಬಿಡಿ.
ಮನೆಯಿಂದಲೇ ಉತ್ತಮ ಆಹಾರ ಪದ್ಧತಿಯನ್ನು ಕಲಿಸಿಕೊಡುವುದು ಪೋಷಕರ ಜವಾಬ್ದಾರಿ.



