ಮನಬಿಚ್ಚಿ ಹೇಳುವ ಹಾಗಿಲ್ಲ
ಕಣ್ಣಂಚಿ ನಲ್ಲಿ ಕಣ್ಣೀರು ಮಾತ್ರ
ನಿನ್ನದೇನು ಮಹಾನ್ ನೋವುಗಳೇ
ಎಲ್ಲರ ಹಾಗೆ ನೀನೂ ಕೂಡ
ಅತ್ತರೇನು ನಕ್ಕರೇನು ನಿನ್ನ ಕೇಳುವವರಾರು
ನಾಲ್ಕು ಗೋಡೆಗಳ ಮಧ್ಯವಷ್ಟೆ ನಿನ್ನ ರೋದನ
ಕೈಗೆ ಕೋಳ ಕಟ್ಟಬೇಕಾಗಿಲ್ಲ
ಮಾತಿನ ಸರಪಳಿಯೇ ಸಾಕಲ್ಲವೇ?
ಶತಮಾನಗಳೇನೋ ಕಳೆದಿವೆ
ಹೆಣ್ಣಿನ ಬಾಳಿಗೆ ತೂಕವೇನೋ ಬಂದಿದೆ
ನೋಟಗಳಲ್ಲಿ ಅದೇ ಭಾವನೆಯಲ್ಲವೇ
ಇಲ್ಲವೆನ್ನಲ್ಲ ಸ್ವಾತಂತ್ರ್ಯ ವಿದೆ, ಹಕ್ಕೂ ಇದೆ
ಕಾನೂನಿದೆ, ನ್ಯಾಯವಿದೆ
ಎಲ್ಲ ಅದರದರ ಸ್ಥಾನದಲ್ಲಿದೆ
ಎಲ್ಲರಿಗೂ ಎಟುಕುವುದು ಅನುಮಾನ
ಹಣಬಲವಲ್ಲವೇ ಇಲ್ಲಿಯ ಪರಿಮಾಣ
ಹೂವಾಗಿ ಅರಳಬೇಕಿತ್ತು
ಹಕ್ಕಿಗಳಾಗಿ ಹಾರಾಡಬೇಕಿತ್ತು
ನೀರಾಗಿ ಹರಿಯಬೇಕಿತ್ತು
ಗಂಡಾಗಿ ಹುಟ್ಟಬೇಕಿತ್ತು
ಹೆಣ್ಣು ಅಂದುಕೊಂಡದ್ದು ಅಂತು ನಿಜ
ಎಲ್ಲಿದೆ ಸಾರ್ಥಕ ಬದುಕು
ನಮ್ಮೊಳಗೇ ಪ್ರಶ್ನಿಸಬೇಕಿದೆ???
ರುಮಾನ, ಮುಂಡೋಳಿ



