ಬೆಂಗಳೂರು: ಪಟ್ನಾದಲ್ಲಿ ಡಿಸೆಂಬರ್ 15, 2025ರಂದು ನಡೆದ ಆಯುಷ್ ವೈದ್ಯರ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಮ್ ಮಹಿಳಾ ವೈದ್ಯರೊಬ್ಬರ ನಿಖಾಬ್ ಅನ್ನು ಎಳೆದ ಘಟನೆಯು ಅತ್ಯಂತ ಖಂಡನೀಯವಾಗಿದೆ.
ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಧಾರ್ಮಿಕ ಸ್ವಾತಂತ್ರ್ಯ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಖಾತರಿಪಡಿಸಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮಹಿಳೆಯ ಧಾರ್ಮಿಕ ಆಚರಣೆ ಅಥವಾ ವೈಯಕ್ತಿಕ ಆಯ್ಕೆಯನ್ನು ಸಾರ್ವಜನಿಕವಾಗಿ ಉಲ್ಲಂಘಿಸುವುದು ಸಂವಿಧಾನದ ಮೌಲ್ಯಗಳಿಗೆ ಮಾಡಿದ ಅವಮಾನವಾಗಿದೆ. ಮಾತ್ರವಲ್ಲ ಈ ಕೃತ್ಯವು ಮಹಿಳೆಯರ ಘನತೆ, ಸುರಕ್ಷತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದೆ.
ಈ ದೇಶದ ಸಂವಿಧಾನವು ಎಲ್ಲ ನಾಗರಿಕರಿಗೂ ಗೌರವಯುತ, ಘನತೆಯುತ ಮತ್ತು ಸಮಾನ ಜೀವನವನ್ನು ಭರವಸೆ ನೀಡುತ್ತದೆ. ಒಂದು ಕಡೆ ದೇಶವನ್ನು ತಾಯಿಯೆಂದು ಪೂಜಿಸುತ್ತೇವೆ ಮತ್ತೊಂದು ಕಡೆ ಈ ದೇಶದ ಮಹಿಳೆಯರ ಮೇಲೆ ಈ ರೀತಿಯ ದಾಳಿಗಳು ನಿರಂತರವಾಗಿ ನಡೆಯುತ್ತಿರುವುದು ದುರಾದೃಷ್ಟಕರ.
ಈ ಕೃತ್ಯವನ್ನು ಫಾರ್ವರ್ಡ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ ಮತ್ತು ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತದೆ ಹಾಗೂ ಎಲ್ಲ ಮಹಿಳೆಯರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಆಯ್ಕೆಯನ್ನು ರಕ್ಷಿಸಲು ಸೂಕ್ತ ಕಾನೂನುಗಳು ಮತ್ತು ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸುತ್ತದೆ.
ಫಾರ್ವರ್ಡ್ ಟ್ರಸ್ಟ್



