ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳ ಅತಿಯಾದ ವ್ಯಸನಕ್ಕೆ ಒಳಗಾಗುತ್ತಿರುವುದು ಮತ್ತು ಅಂತರ್ಜಾಲದಲ್ಲಿ ಅಶ್ಲೀಲ ವಿಷಯಗಳು ಯಾವುದೇ ಅಡೆತಡೆಯಿಲ್ಲದೆ ಲಭ್ಯವಿರುವುದು ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಕಳವಳಕಾರಿ ವಿದ್ಯಮಾನದ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿರುವ ಮದ್ರಾಸ್ ಹೈಕೋರ್ಟ್, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದನ್ನು ತಡೆಯಲು ಆಸ್ಟ್ರೇಲಿಯಾ ಮಾದರಿಯ ಕಾನೂನು ಜಾರಿಗೆ ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಎಸ್. ವಿಜಯಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಐತಿಹಾಸಿಕ ಕಾನೂನನ್ನು ಅಂಗೀಕರಿಸಿದೆ.
ಭಾರತದಲ್ಲೂ ಇಂತಹ ಕಾನೂನಿನ ಅಗತ್ಯವಿದ್ದು, ಅಂತಹ ವ್ಯವಸ್ಥೆ ಜಾರಿಗೆ ಬರುವವರೆಗೆ ಸರ್ಕಾರವು ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಕಠಿಣ ಕ್ರಮ ಅತ್ಯಂತ ಅನಿವಾರ್ಯವಾಗಿದೆ. ಏಕೆಂದರೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಷಯಗಳು ಮಕ್ಕಳ ಮೇಲೆ ಮಾನಸಿಕವಾಗಿ ತೀವ್ರ ಪ್ರಭಾವ ಬೀರುತ್ತಿದ್ದು, ಅವರನ್ನು ಸೈಬರ್ ಲೋಕದ ಅಪಾಯಗಳಿಗೆ ಒಡ್ಡುತ್ತಿವೆ.
ಇಂಟರ್ನೆಟ್ ಸೇವಾ ಪೂರೈಕೆದಾರರು ಪೋಷಕರಿಗಾಗಿ ವಿಶೇಷ ನಿಯಂತ್ರಣ ವ್ಯವಸ್ಥೆಗಳನ್ನು ರೂಪಿಸಬೇಕಾದ ಅಗತ್ಯವಿದ್ದು, ಮಕ್ಕಳನ್ನು ದಾರಿ ತಪ್ಪಿಸುವ ಕಂಟೆಂಟ್ಗಳಿಂದ ದೂರವಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮದ ಕಪಿಮುಷ್ಠಿಗೆ ಸಿಲುಕುತ್ತಿರುವ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಆದಷ್ಟು ಬೇಗ ಆಸ್ಟ್ರೇಲಿಯಾ ಮಾದರಿಯ ಕಾನೂನು ತರುವ ಕುರಿತು ಚಿಂತಿಸಬೇಕಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.
ಭಾರತದಂತಹ ಬೃಹತ್ ದೇಶದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಇಂತಹ ನಿಯಮಗಳು ಜಾರಿಗೆ ಬರುವುದು ಅವರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.



